ನಂದನಾರ್
ಶಿವಭಕ್ತ. ತಮಿಳುನಾಡಿನವ. ಚಿದಂಬರದಲ್ಲಿ ನಟರಾಜನನ್ನು ಸಾಕ್ಷಾತ್ಕರಿಸಿಕೊಂಡ ಭಕ್ತಾಗ್ರೇಸರ.
ಚೋಳದೇಶದ ಸತ್ಯಾಸನವೆಂಬ ಊರಿನಲ್ಲಿದ್ದ ವೀರನೆಂಬ ಅಂತ್ಯಜನಿಗೆ ಶಿವನ ಅನುಗ್ರಹದಿಂದ ದೊರೆತವ. ಪರಮೇಶ್ವರ ಈತನಿಗೆ ಜ್ಯೋತಿರ್ಲಿಂಗದ ದರ್ಶನವಿತ್ತು. ಚಿದಂಬರದಲ್ಲಿ ಅಗ್ನಿಶುದ್ಧಿ ಮಾಡಿಕೊಂಡು ತ್ಯಾಗರಾಜೇಶ್ವರನ ಗುಡಿಯನ್ನು ಪ್ರವೇಶಿಸುವಂತೆ ತಿಳಿಸಿದ. ಅದರಂತೆ ಮಾಡಿದಾಗ ಪರಮೇಶ್ವರ ಈತನನ್ನು ವಿಮಾನದಲ್ಲಿ ಕೂಡಿಸಿಕೊಂಡು ಕೈಲಾಸಕ್ಕೆ ಕರೆದೊಯ್ದ.
ಇನ್ನೊಂದು ಕಥೆಯ ಪ್ರಕಾರ ಈತ ಒಮ್ಮೆ ಶಿವಭಕ್ತಿಯಿಂದ ಸ್ಪೂರ್ತಿಗೊಂಡು ಚಿದಂಬರಕ್ಕೆ ಬಂದಾಗ ಅರ್ಚಕರು ಅಂತ್ಯಜನಾದ ಈತನನ್ನು ದೇವಾಲಯದ ಒಳಕ್ಕೆ ಬಿಡದೆ ತಡೆದರೆಂದೂ ಆಗ ಈತನ ಭಕ್ತಿಗೆ ಮೆಚ್ಚಿದ ಪರಶಿವನ ಮೂರ್ತಿ ಮೈದಳೆದು ಈತನ ಹಿಂದೆ ನಡೆದು ಹೋಯಿತೆಂದೂ ತಿಳಿದುಬರುತ್ತದೆ.
 
(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ